ನಾಡವರ ಬಾಡ್ಮಿಂಟನ್ ಟೂರ್ನಮೆಂಟ್

ಇತ್ತೀಚೆಗೆ ಅಂದರೆ, ಕಳೆದ ಐದಾರು ವರ್ಷಗಳಿಂದ ನಾಡವರ ಸಮಾಜ, ಬೆಂಗಳೂರಿನ ಯುವಕರು ಶ್ರೀ ಶಿವಪ್ಪ ಪಿ. ನಾಗರಕಟ್ಟೆ ಇವರ ಸಾರಥ್ಯದಲ್ಲಿ, ಸಹಾಯ-ಸಹಕಾರದೊಂದಿಗೆ ಹಾಗೂ ಸಮಾಜದ ಸದಸ್ಯರುಗಳ ಧನ ಸಹಾಯದಿಂದ ನಾಡವರ ಬಾಡ್ಮಿಂಟನ್ ಟೂರ್ನಮೆಂಟನ್ನು ಅಂತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಟೂರ್ನಮೆಂಟ್‌ಗೆ ರಾಜ್ಯ ವಿವಿಧ ಭಾಗಗಳಿಂದ ಸುಮಾರು 25 ರಿಂದ 30 ತಂಡಗಳು ಆಗಮಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾಗುತ್ತಿದ್ದಾರೆ. ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಿದ್ದು, ಸಂಗ್ರಹಗೊಂಡ ಮೊತ್ತವನ್ನು ಇದೇ ಕಾರ್ಯಕ್ರಮಕ್ಕಾಗಿ ವಿನಿಯೋಗಿಸಲಾಗುತ್ತಿದೆ. ನಾಡವರ ಬಾಡ್ಮಿಂಟನ್ ಟೂರ್ನಮೆಂಟನಲ್ಲಿ ನುರಿತ ನಿರ್ಣಾಯಕರನ್ನು ನೇಮಕಮಾಡಿಕೊಳ್ಳಲಾಗುತ್ತಿದೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಕರೆಯಿಸಿ, ಅವರಿಂದ ನಮ್ಮ ಸಮಾಜದ ಯುವಪೀಳಿಗೆಗೆ ಮಾರ್ಗದರ್ಶನ ಒದಗಿಸಿ, ಅನುಭವಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ಸಮಾಜದ ಯುವ ಪ್ರತಿಭೆಗಳು ವರ್ಷದಿಂದ ವರ್ಷಕ್ಕೆ ಈ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಅವರನ್ನು ಹುರಿದುಂಬಿಸಲು ಅವರುಗಳ ಕುಟುಂಬದವರು ಭಾಗಹಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಪುರುಷರು-ಮಹಿಳೆಯರು, ಹಿರಿಯರು-ಕಿರಿಯರು, ಹೀಗೆ ಎಲ್ಲಾ ವರ್ಗದವರಿಗೆ ವಯೋಮಿತಿ ಆಧಾರದ ಮೇಲೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಪ್ರತಿವರ್ಷ ಸಮಾಜದ ಸದಸ್ಯರಲ್ಲಿ ಕೆಲವರನ್ನು ಅತಿಥಿಗಳನ್ನಾಗಿ ಆಯ್ಕೆ ಮಾಡಿಕೊಂಡು, ಸ್ಪರ್ಧಾಳುಗಳ ಪರಿಚಯ ಮಾಡಿಕೊಡಲಾಗುತ್ತದೆ. ಅತಿಥಿಗಳು ಸಹ ಆಟಗಾರರನ್ನು ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದಾರೆ. ನಾಡವರ ಬಾಡ್ಮಿಂಟನ್ ಟೂರ್ನಮೆಂಟನಲ್ಲಿ ಭಾಗವಹಿಸುವ ಎಲ್ಲರಿಗೂ ಟೀ, ಕಾಫೀ, ಲಘು ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಸಮಾಜದ ಸದಸ್ಯರುಗಳು ಈ ಕಾರ್ಯಕ್ರಮಕ್ಕೆ ಅಗತ್ಯವಾದ ಧನಸಹಾಯ ಮಾಡುತ್ತಿದ್ದು, ಇನ್ನೂ ಕೆಲವರು ಬಹುಮಾನಗಳ ಮೊತ್ತವನ್ನು ತಾವುಗಳು ಪ್ರಾಯೋಜಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾಗಿದ್ದಾರೆ. ನಾಡವರ ಬಾಡ್ಮಿಂಟನ್ ಟೂರ್ನಮೆಂಟನಲ್ಲಿ ಹಲವಾರು ರೀತಿಯ ಬಹುಮಾನಗಳನ್ನು ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ನೀಡಲಾಗುತ್ತಿದೆ. ಸ್ಮರಣಿಕೆ ಹಾಗೂ ನಗದು ರೂಪದಲ್ಲಿಯೂ ಬಹುಮಾನ ನೀಡಲಾಗುತ್ತಿದೆ. ನಾಡವರ ಸಮಾಜ ಬೆಂಗಳೂರು ವತಿಯಿಂದ ಪ್ರಥಮ ಬಹುಮಾನವನ್ನು ನೀಡಲಾಗುತ್ತಿದೆ. ಸದರಿ ಕಾರ್ಯಕ್ರಮದ ನಂತರದಲ್ಲಿ ಉಳಿಯುವ ಹೆಚ್ಚುವರಿ ಹಣವನ್ನು ಸಮಾಜದ ಖಾತೆಗೆ ಜಮಾ ಮಾಡಲಾಗುತ್ತಿದೆ.