ಪ್ರಥಮ ಅಧ್ಯಕ್ಷರ ಮುನ್ನುಡಿ

ಶ್ರೀರಂಗ ಆರ್. ನಾಯಕ

ಶಿಕ್ಷಕ ವೃತ್ತಿ ಯನ್ನೇ ಬಹುತೇಕ ಅವಲಂಬಿಸಿ ಇತರ ಕೆಲಸಕ್ಕಾಗಿ ಮುಂಬೈ ಕಡೆಗೆ ಮುಖಮಾಡುತ್ತಿದ್ದ ನಾಡವರು, ಕೆಲಸಗಳನ್ನು ಹುಡುಕಿ ಬೆಂಗಳೂರಿಗೆ ಬರುತ್ತಿದ್ದ ಸಮಯ ಅದು. ನಿರುದ್ಯೋಗ ಸಮಸ್ಯೆ, ತಾಂತ್ರಿಕ ಕೆಲಸಗಳಿಗೆ ಪ್ರಾಮುಖ್ಯತೆಯ ಕಾಲವದು. ಬಡತನದಿಂದ ಸಮಸ್ಯೆಗಳನ್ನು ಎದುರಿಸಲು ಕಷ್ಟಸಾಧ್ಯವಾದ ಕಾಲವದು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಡವ ಸಮಾಜದ ಪ್ರಮುಖರಾದ ಶ್ರೀಯುತರಾದ ಉದಯರಾಜ್, ಮಧುಸೂದನ್, ಚೇತನ್ , ಜಯ, ರಮೇಶ್, ಜ್ಞಾನದೇವ್ ಮುಂತಾದವರ ತಲೆಯಲ್ಲಿ ನಾವು ನಾಡವರ ಏಳ್ಗೆಗಾಗಿ ಸಂಘ ಕಟ್ಟಬೇಕು ನಮ್ಮವರ ಸಮಸ್ಯೆಗಳಿಗೆ ಸಂಘಟಿತ ಹೋರಾಟ ಮಾಡಬೇಕು ಎಂಬ ವಿಚಾರ ಹುಟ್ಟಿಕೊಂಡಿತು. ತತ್ಫಲವಾಗಿ ದಿನಾಂಕ ೧೨ ಏಪ್ರಿಲ್ ೧೯೯೦ ರಂದು ಉದಯರಾಜು ಅವರ ಮನೆಯಲ್ಲಿ ಈ ಬಗ್ಗೆ ನಿರ್ಣಯಿಸಿ ಅದಕ್ಕೆ ನಮ್ಮ ಸಮಾಜದ ಪ್ರಾಮಾಣಿಕ ಅಧಿಕಾರಿಯವರಾದ ಎಂ.ಎಚ್. ನಾಯಕರವರ ಆಶೀರ್ವಾದ ಪಡೆಯಲಾಯಿತು. ಸಂಘಕ್ಕೆ ಅನಿರೀಕ್ಷಿತವಾಗಿ ನನ್ನನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಂಘದ ಪ್ರಮುಖ ಧ್ಯೇಯೋದ್ಧೇಶಗಳು
  • ನಿರುದ್ಯೋಗ ನಿವಾರಣೆಗೆ ಪ್ರಯತ್ನಿಸುವುದು
  • ಸದಸ್ಯರ ಆರ್ಥಿಕ ಪ್ರಗತಿ ಸಾಧಿಸುವುದು
  • ಸದಸ್ಯರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರಲು ಸಹಾಯ ಮಾಡುವುದು
  • ಸದಸ್ಯರು ಪರಸ್ಪರರನ್ನು ಪರಿಚಯಿಸಿಕೊಳ್ಳುವುದು
  • ಸಂಘಕ್ಕೆ ತನ್ನದೇ ಆದ ಕಟ್ಟಡವನ್ನು ಹೊಂದುವುದು

ನಂತರ ಜರುಗಿದ ಆಡಳಿತ ಮಂಡಳಿಯ ಸಭೆಗಳಲ್ಲಿ ಗ್ರಾಹಕರ ಸಹಕಾರ ಸಂಘ ಮತ್ತು ಪತ್ತಿನ ಸಹಕಾರ ಸಂಘಗಳ ಸ್ಥಾಪನೆ ಮಾಡಬೇಕೆಂದು ನಿರ್ಣಯಿಸಲಾಯಿತು. ನಾಡವರು ನೆಲೆಸಿರುವ ಪ್ರತಿ ಗ್ರಾಮದಲ್ಲಿ ಒಬ್ಬರನ್ನು ಗುರುತಿಸಿ ಅವರಿಂದ ನಿರುದ್ಯೋಗ ಮತ್ತು ಇತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಲಭ್ಯ ಖಾಲಿ ಹುದ್ದೆಗಳ ಬಗ್ಗೆ ಅವರಿಗೆ ಮಾಹಿತಿ ಒದಗಿಸಿ ಮಾರ್ಗದರ್ಶನ ನೀಡಲು ನಿರ್ಧರಿಸಲಾಯಿತು.

ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಮಾಜದ ಗಣ್ಯರನ್ನು ಕರೆಯಿಸಿ ಸಂಘದ ಸದಸ್ಯರು ಅವರೊಡನೆ ಬೆರೆಯಲು ಅವಕಾಶ ಮಾಡಿಕೊಟ್ಟು ಅವರಿಂದ ಪ್ರೇರಣೆ ಪಡೆಯಲಾಗಿತ್ತು. ಸದಸ್ಯರು ಸಭೆಯ ಸಮಯದಲ್ಲಿ ಪರಸ್ಪರ ಪರಿಚಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.

ಇಲಿಯಾಕಾರದಲ್ಲಿ ಪ್ರಾರಂಭವಾದ ಸಂಘ ಇಂದು ಆನೆಯಾಕಾರದಲ್ಲಿ ಬೃಹತ್ತಾಗಿ ಬೆಳೆದು ನಿಂತಿದೆ. ಈ ಪ್ರಗತಿಗೆ ಅಧ್ಯಕ್ಷರು, ನಿರ್ದೇಶಕರು, ಕ್ರಿಯಾಶೀಲ ಸದಸ್ಯರ ಪರಿಶ್ರಮ ಕಾರಣವಾಗಿದ್ದು ಅವರೆಲ್ಲರೂ ಅಭಿನಂದನಾರ್ಹರು. ಮುಂದೆ ಸಾಗಬೇಕಾದ ದಾರಿ ತುಂಬಾ ದೂರವಿದೆ. ನಮ್ಮದೇ ಆದ ಕಟ್ಟಡ ನಿರ್ಮಾಣವಾಗಬೇಕಿದೆ. ನಾಡವ ಸಮಾಜದ ಬಗ್ಗೆ ಪ್ರತಿಯೊಬ್ಬರಿಗೆ ಸರಿಯಾದ ತಿಳಿವಳಿಕೆ ಕೊಡಬೇಕಾಗಿದೆ.

ನಾಡವರ ವೈಶಿಷ್ಟ್ಯ, ಸ್ವಾತಂತ್ರ್ಯ ಹೋರಾಟಕ್ಕೆ ನಾಡವರು ನೀಡಿದ ಕೊಡುಗೆ, ನಾಡವರ ಧೈರ್ಯ, ಸ್ಥೈರ್ಯ, ಉದಾರತೆ, ದೇಹ ಧಾರ್ಡ್ಯ, ಬುದ್ಧಿವಂತಿಕೆ, ಪರಿಶ್ರಮ ಇವುಗಳ ಬಗ್ಗೆ ಕವಿ ಬಣ್ಣಿಸಿದ್ದು, ನಾಡವರಲ್ಲಿ ಒಬ್ಬನೂ ಬಿಕ್ಷೆ ಬೇಡದಂಥಾ ಸ್ವಾಭಿಮಾನಿಗಳು ಎಂಬುದು ಎಲ್ಲರಿಗೂ ಗೊತ್ತಾಗಿದೆ.
“ನಾನು ಒಬ್ಬ ನಾಡವ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು.

ಚಳವಳಿಯಲ್ಲಿ ಪಾಲ್ಗೊಂಡಾಗ ಜೈಲಿನಲ್ಲಿ ನಾಡವರ ಅಂಗಸೌಸ್ಥವ ಕಂಡು "Roman Figure" ಎಂದು ಪ್ರಶಂಸಿಸಿದ್ದು ತಿಳಿದು ಅದರಿಂದ ಪ್ರೇರಿತರಾಗಿ ನಮ್ಮವರು ಅದನ್ನು ಉಳಿಸಿಕೊಂಡು ಹೋಗಬೇಕೆಂಬ ಹಂಬಲ ಮೂಡಿಸಬೇಕಾಗಿದೆ.

ಪ್ರತಿಕುಟುಂಬದ ಪ್ರತಿ ಉದ್ಯೋಗಿಯನ್ನು ಸಂಘದ ಸದಸ್ಯನನ್ನಾಗಿ ನೋಂದಾಯಿಸಬೇಕು. ಸಂಘವು ಮುಂಬರುವ ದಿನಗಳಲ್ಲಿ ಅಭಿವೃದ್ಧಿಯಾಗಿ ಹೆಮ್ಮರವಾಗಿ ಬೆಳೆದು ಸಮಾಜದವರಿಗೆ ನೆರಳು, ಆಶ್ರಯ, ಫಲ ನೀಡಿ ರಕ್ಷಿಸುವಂತಾಗಲೆಂದು ಹಾರೈಸುವೆ.

ಶ್ರೀರಂಗ ಆರ್. ನಾಯಕ
ಪ್ರಥಮ ಅಧ್ಯಕ್ಷರು
ನಾಡವರ ಸಮಾಜ (ರಿ), ಬೆಂಗಳೂರು