ಬೆಂಗಳೂರು ನಾಡವರ ಬಂಡಿಹಬ್ಬ

ಸಮಾಜದ ಕಾರ್ಯಕ್ರಮದ ಪಟ್ಟಿಯಲ್ಲಿ ಬಂಡಿಹಬ್ಬ ಕಾರ್ಯಕ್ರಮವು ಅಗ್ರಸ್ಥಾನವನ್ನು ಪಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಭಾಗವಹಿಸಿ ಕುಲಬಾಂಧವರೊಂದಿಗೆ ಬೆರೆತು ಕುಶಲೋಪರಿಯಿಂದ ಕಾಲ ಕಳೆಯಲು ಇದೊಂದು ಸದಾವಕಾಶವನ್ನು ಒದಗಿಸಿದೆ.

ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳಿದ್ದು, ಮಕ್ಕಳೊಂದಿಗೆ ಬೆರೆತು ಖುಷಿಪಡುವ ದಿನವಾಗಿರುತ್ತದೆ. ಬೆಳಗ್ಗೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬಹುಮಾನಗಳನ್ನು ಪಡೆಯುವ ಅವಕಾಶ, ನಂತರದಲ್ಲಿ ಊರಿಂದ ತಂದ ನಾಡವರ ಮೆಚ್ಚಿನ ಶಿಟ್ಲಿನ ಸಾರು ಹಾಗೂ ಕುಸಲಕ್ಕಿ ಗಂಜಿ ಸವಿಯುವ ಅವಕಾಶಗಳಿರುತ್ತದೆ. ಸಂಜೆ ನೃತ್ಯ, ನಾಟಕ, ಯಕ್ಷಗಾನಗಳನ್ನೊಳಗೊಂಡ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಊರಿನಲ್ಲಿ ಮಾಡುವ ಕೋಳಿ ಸಾರು, ಅಕ್ಕಿರೊಟ್ಟಿ, ವಡೆ ಸವಿಯುವ ಸುವರ್ಣವಕಾಶ. ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲರೊಂದಿಗೆ ಕುಳಿತು ಸಹಭೋಜನ ಮಾಡುವ ಖುಷಿ ಎಲ್ಲರದಾಗಿರುತ್ತದೆ. ಯುವಕರಂತೂ ಎಲ್ಲರಿಗೂ ಹೊಟ್ಟೆ ತುಂಬಾ ಊಟ ಬಡಿಸುವ ಸಂಭ್ರಮಕ್ಕಾಗಿ ತುದಿಗಾಲಿನಲ್ಲಿ ನಿಂತಿರುತ್ತಾರೆ.

ಬಂಡಿಹಬ್ಬದಲ್ಲಿ ಒಳಗೊಂಡಿರುವ ಇತರೆ ಕಾರ್ಯಕ್ರಮಗಳು:

  1. ಪ್ರತಿವರ್ಷ ಬಂಡಿ ಹಬ್ಬದಂದು ವಿಶೇಷ ವ್ಯಕ್ತಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸುವ ಕಾರ್ಯಕ್ರಮವಿರುತ್ತದೆ.
  2. ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಡಿಗ್ರಿ, ಪಿ.ಜಿ. ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ.
  3. ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
  4. ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
  5. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ, ಹುದ್ದೆ ಪಡೆದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಹಿಂದಿನ ಬಂಡಿಹಬ್ಬದಲ್ಲಿ ಗೌರವಿಸಲಾದ ಗಣ್ಯರು:

  1. ಡಾ|| ನಿರಂಜನ್ ಕೆ. ನಾಯಕ್ - ವಿಜ್ಞಾನಿಗಳು, ಮುಂಬೈ
  2. ಶ್ರೀ ಮೋಹನ್ ಎಂ.ನಾಯಕ್ - ಉದ್ದಿಮೆದಾರರು, ಮುಂಬೈ
  3. ಶ್ರೀ ಎಸ್.ಆರ್.ನಾಯ್ಕ್ - ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಹಾಗೂ ಕಾನೂನು ಮಂಡಳಿ ಅಧ್ಯಕ್ಷರು
  4. ಶ್ರೀ ಎನ್.ಆರ್.ನಾಯಕ್ - ನಿವೃತ್ತ ಪ್ರಾಂಶುಪಾಲರು ಹಾಗೂ ಹಿರಿಯ ಸಾಹಿತಿಗಳು

ಇವರನ್ನು ಹೊರತುಪಡಿಸಿ ಸಂಘ ಪ್ರಾರಂಭವಾದ ಹೊಸದರಲ್ಲಿ ನಮ್ಮ ಸಮಾಜದ ಗಣ್ಯರು ಹಾಗೂ ನಿವೃತ್ತಿ ಪಿ.ಯು.ಸಿ. ಬೋರ್ಡಿನ ನಿರ್ದೇಶಕರಾದ ಶ್ರೀ ವಿ.ಬಿ. ಗಾವಂಕರ್ ಹಾಗೂ ಹೊಸ್ಕೇರಿ ಗ್ರಾಮದ ಗಣ್ಯರು ಹಾಗೂ ಸ್ವಾತಂತ್ರ್ಯ ಯೋಧರು ಆದ ಶ್ರೀ ಜೋಗಿ ಬೀರಣ್ಣ ನಾಯಕ ಇವರನ್ನು ಸಹ ನಮ್ಮ ಸಮಾಜ ಬೆಂಗಳೂರಿನ ಸರ್ವಸದಸ್ಯರ ಸಭೆಗೆ ಆಹ್ವಾನಿಸಿ ಸನ್ಮಾನಿಸಲಾಗಿರುತ್ತದೆ. ಅವರುಗಳು ಸಹ ಸದರಿ ಸಭೆಯನ್ನು ಉದ್ದೇಶಿಸಿ ನಾಡವರ ಗುಣಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿಕೊಡುವುದರ ಜೊತೆಗೆ ಮುಂದಿನ ಪೀಳಿಗೆ ಜೀವನದಲ್ಲಿ ಯಾವ ರೀತಿ ಶಿಸ್ತನ್ನು ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.