ನಾಡವರ ಸಮಾಜ, ಬೆಂಗಳೂರು (ರಿ) ನಡೆದುಬಂದ ದಾರಿಯ ಒಂದು ನೋಟ “ನಾಡವರ ಸಮಾಜ, ಬೆಂಗಳೂರು” ಎಂಬ ಹೆಸರಿನಲ್ಲಿ ನಮ್ಮ ಸಂಘವು 1990 ನೇ ಇಸವಿ ಏಪ್ರಿಲ್ ತಿಂಗಳ 12 ರಂದು ಸಂಘ ಸಂಸ್ಥೆಗಳ ನೋಂದಣಾಧಿಕಾರಿ ಕಚೇರಿ, ಬೆಂಗಳೂರು, ಇಲ್ಲಿ ನೋಂದಾವಣೆಯಾಗಿದೆ. ಅಂದರೆ ಇಂದಿಗೆ 35 ಸಂವತ್ಸರಗಳನ್ನು ಪೂರೈಸಿ 36ನೇ ವರ್ಷಕ್ಕೆ ಕಾಲಿಟ್ಟಿದೆ.

ಸಂಘದ ಸ್ಥಾಪನೆಯ ಹಿನ್ನೆಲೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಕುಮಟಾ ತಾಲೂಕಿನಲ್ಲಿ ನೆಲೆಸಿರುವ ನಾಡವರು ಮೂಲತಃ ಕೃಷಿಕರು. 1956ರ ವರೆಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ ಸಿಕ್ಕಿದ ನಂತರ ನಮ್ಮ ನಾಡವ ಸಮಾಜದವರು ಉದ್ಯೋಗವನ್ನು ಹುಡುಕಿಕೊಂಡು ಮುಂಬೈ ಗೆ ಹೋಗುತ್ತಿದ್ದರು.1956 ರ ನಂತರ ನಮ್ಮವರು ಉದ್ಯೋಗಾವಕಾಶವನ್ನು ಹುಡುಕಿಕೊಂಡು ಬೆಂಗಳೂರಿನ ಕಡೆಗೆ ಬರಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸುಮಾರು 20ರಿಂದ 25 ನಾಡವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಒಬ್ಬರಿಗೊಬ್ಬರು ಬೆಂಗಳೂರಿನಲ್ಲಿ ಸಿಕ್ಕಾಗಲೆಲ್ಲ ನಮ್ಮವರು ಮತ್ತೆ ಯಾರಿದ್ದಾರೆ ಎಂಬ ಚರ್ಚೆಯು ಇವರ ನಡುವೆ ನಡೆಯುತ್ತಿತ್ತು.ಆ ಸಮಯದಲ್ಲಿ ನಗರ ಪಾಲಿಕೆಯಲ್ಲಿ ಉದ್ಯೋಗಿಯಾಗಿದ್ದ ಶ್ರೀ ಹಮ್ಮಣ್ಣ ನಾಯಕ ವಾಸರೆ ಇವರನ್ನು ಇನ್ನುಳಿದ ನಾಡವ ಬಂಧುಗಳು ಭೇಟಿಯಾದಾಗಲೆಲ್ಲ ಬೆಂಗಳೂರಿನಲ್ಲಿ ನೆಲೆಸಿರುವ ನಾವೆಲ್ಲರೂ ನಾಡವರು ಒಂದು ಸಂಘವನ್ನು ಕಟ್ಟಬೇಕೆಂದು ಹೇಳುತ್ತಿದ್ದರು. 1977ರಲ್ಲಿ ಇಂದಿರಾನಗರದಲ್ಲಿ ಶ್ರೀ ಜ್ಞಾನದೇವ ನಾಯಕರ ನಿವಾಸದಲ್ಲಿ ಒಂದು ರವಿವಾರ ಸಾಯಂಕಾಲ 12 ಜನ ನಾಡವರು ಸೇರಿದ್ದರು, ಸಮಯ ಸಿಕ್ಕಾಗ ಇವರೆಲ್ಲರೂ ಭೇಟಿಯಾಗುತ್ತಾ ಇರಬೇಕು ಎಂದು ತೀರ್ಮಾನಿಸಿದರು. ೧೯೮೦ ರ ಸುಮಾರಿಗೆ ನಮ್ಮ ಸಮಾಜದ ಬಹಳಷ್ಟು ಜನರು ಸರಕಾರಿ ಉದ್ಯೋಗ ಹಾಗೂ ಇತರೆ ಉದ್ಯೋಗ, ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸಲು ಬೆಂಗಳೂರಿನಲ್ಲಿ ಬಂದು ನೆಲೆಸಿದ ಅದೇ ಸಮಯದಲ್ಲಿ ಶಿಕ್ಷಣಕ್ಕಾಗಿ ಕೂಡ ನಮ್ಮವರು ಬೆಂಗಳೂರಿಗೆ ಬರಲು ಪ್ರಾರಂಭಿಸಿದರು. ಸಾಮಾನ್ಯವಾಗಿ ನಾಡವ ಮಿತ್ರರು ಭೇಟಿಯಾದಾಗ ನಾವೆಲ್ಲರೂ ಸೇರಿ ಒಂದು ಸಂಘವನ್ನು ಕಟ್ಟಿ ವರ್ಷಕ್ಕೆ ಒಮ್ಮೆಯಾದರೂ ಒಂದು ಕಡೆ ಸೇರಬೇಕೆಂದು ಚರ್ಚಿಸುತ್ತಿದ್ದರು. ಇದರ ನಿಮಿತ್ತ 1988ರ ಇಸವಿಯಲ್ಲಿ ನಮ್ಮ ಸಮಾಜದ ಕೆಲ ಹಿರಿಯರನ್ನು ಸಂಪರ್ಕಿಸಿ ( ಶ್ರೀ ಎಸ ವಿ ತೊರ್ಕೆ, ಶ್ರೀ ಎಸ ವಿ ಗಾಂವಕರ, ಪ್ರವೀರ ಕವರಿ,ಸುರೇಶ್ ನಾಯಕ್, ರಮೇಶ್ ಟಗರಪುರ, ದೊಡ್ಡತಮ್ಮ ನಾಯಕ್) ಒಂದು ಸಂಘವನ್ನು ಪ್ರಾರಂಭಿಸಬೇಕೆಂದು ತೀರ್ಮಾನಿಸಿದರು.

1989-90 ನೇ ಇಸವಿಯ ಅದೊಂದು ದಿನ ಅಮರಜ್ಯೋತಿನಗರದಲ್ಲಿರುವ ರಂಗಣ್ಣನ (ಶ್ರೀರಂಗ ರಾಮಾ ನಾಯಕ) ಇವರ ಮನೆಗೆ ಜಯ ನಾಯಕ, ವಾಸರೆ ಹಾಗೂ ಚೇತನ ಟಿ ನಾಯಕ, ಬೋಳೆ ಇವರು ಹೋದಾಗ ಮತ್ತೆ ಸಂಘವನ್ನು ಕಟ್ಟುವ ಬಗ್ಗೆ ರಂಗಣ್ಣ ಸಲಹೆಯ ಮೇರೆಗೆ ಉದಯರಾಜ ಎಂ. ನಾಯಕ ಇವರ ಅಭಿಪ್ರಾಯ ಪಡೆಯಲು ದಿನವೊಂದನ್ನು ಗೊತ್ತುಪಡಿಸಲಾಯಿತು. ಒಂದು ದಿನ ಭಾನುವಾರದಂದು ವಿಜಯನಗರದಲ್ಲಿ ವಾಸವಾಗಿರುವ ಉದಯರಾಜ ಎಂ. ನಾಯಕರವರ ಮನೆಗೆ ವಾಸರೆಯ ಹೆಚ್.ವಿ. ನಾಯಕ (ಹಮ್ಮಣಣ್ಣ), ಜಯ ನಾಯಕ, ಚೇತನ ನಾಯಕ ಹಾಗೂ ಜಗದೀಶ ಎಲ್. ನಾಯಕರ ಜೊತೆ ರಂಗಣ್ಣರವರು ಹೋದಾಗ ಅವರ ಮನೆಯಲ್ಲಿ ಉದಯರಾಜರವರ ತಂದೆಯವರಾದ ಶ್ರೀ ಎಂ.ಹೆಚ್.ನಾಯಕ್‌ ರವರು ಇದ್ದರು. ಸಂಘವನ್ನು ಸ್ಥಾಪಿಸುವ ವಿಷಯಕ್ಕೆ ಸಂಭದಿಸಿದಂತೆ ಹಿರಿಯರಾದ ಶ್ರೀ ಎಂ.ಹೆಚ್. ನಾಯಕ್‌ರವರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆಯನ್ನು ನಡೆಸಿ, ಸಂಘದ ಸ್ಥಾಪನೆಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿದ ಉದಯರಾಜ ನಾಯಕರವರು ಎಂ.ಆರ್.ನಾಯಕರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿ ಸಂಘದ ನೋಂದಣಿಗೆ ಅಗತ್ಯವಾದ ವಿವರಗಳನ್ನು ಕಲೆಹಾಕಿದರು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ರಂಗಣ್ಣನವರಿಗೆ ಬೈಲಾ ತಯಾರಿಸಿ ಕೊಡುವ ಜವಾಬ್ದಾರಿಯನ್ನು ವಹಿಸಲಾಯಿತು.

ಸಂಘವನ್ನು ನೋಂದಣಿ ಮಾಡುವ ನಿರ್ಣಯ ತೆಗೆದುಕೊಂಡು ಅದಕ್ಕೆ ಪೂರಕವಾಗಿ ಬೇಕಾದ ಹತ್ತಾರು ಸದಸ್ಯರುಗಳ ಪಟ್ಟಿಯನ್ನು ತಯಾರಿಸಲಾಯಿತು ಹಾಗೂ ಪಟ್ಟಿ ಮಾಡಿದ ಸದಸ್ಯರುಗಳನ್ನು ಸೇರಿಸಿ, ಇನ್ನೂ ಹೆಚ್ಚಿನ ಸದಸ್ಯರುಗಳನ್ನು ಸಂಘಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಸಭೆಯನ್ನು ನಡೆಸಲು ತೀರ್ಮಾನಿಸಿ, ಶ್ರೀ ಎಂ.ಆರ್. ನಾಯ್ಕ್ರವರ ಗಾಂಧಿನಗರದಲ್ಲಿದ್ದ ಕಚೇರಿಯಲ್ಲಿ ಸಭೆಯನ್ನು ನಿಗದಿಪಡಿಸಲಾಯಿತು. ಗಾಂಧಿನಗರದಲ್ಲಿರುವ ಶ್ರೀ ಎಂ.ಆರ್. ನಾಯ್ಕ್ರವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೈಲಾವನ್ನು ಓದಿ ಹೇಳಲಾಯಿತು ಹಾಗೂ ಸಂಘಕ್ಕೆ ಹೊಂದಿಕೆಯಾಗುವಂತೆ ಬೈಲಾವನ್ನು ತಿದ್ದುಪಡಿಗೊಳಿಸಿ, ಅಂತಿಮವಾಗಿ ಬೈಲಾ ತಯಾರಿಸಿ ಈ ಬಗ್ಗೆ ಸದಸ್ಯರುಗಳ ಸಲಹೆಯನ್ನು ಪಡೆಯಲಾಯಿತು ಹಾಗೂ ಇನ್ನೂ ಹೆಚ್ಚಿನ ಸದಸ್ಯರುಗಳನ್ನು ಸಂಘಕ್ಕೆ ಸೇರ್ಪಡೆಗೊಳಿಸಿ, ಅಂತಿಮವಾಗಿ 27 ಜನ ಸಂಸ್ಥಾಪಕ ಸದಸ್ಯರುಗಳ ಪಟ್ಟಿಯನ್ನು ತಯಾರಿಸಲಾಯಿತು. ಅವರ ವಿಳಾಸಗಳನ್ನು ನಮೂದಿಸಿ ಸಹಿಗಳನ್ನು ಪಡೆಯಲಾಯಿತು.

‘ನಾಡವರ ಸಂಘ, ಬೆಂಗಳೂರು’ ಎಂಬುದರ ಬದಲಾಗಿ, ‘ನಾಡವರ ಸಮಾಜ, ಬೆಂಗಳೂರು’ ಎಂಬ ಹೆಸರಿನಲ್ಲಿ ಸಂಘವನ್ನು ನೋಂದಾಯಿಸಲು ತೀರ್ಮಾನಿಸಲಾಯಿತು. ಸಂಘವನ್ನು ನೋಂದಣಿ ಮಾಡುವ ಸಲುವಾಗಿ ನಾವು ತಯಾರಿಸಿದ ಸಂಸ್ಥಾಪಕ ಸದಸ್ಯರಲ್ಲಿ ಹಿರಿಯರಾದ ಹಾಗೂ ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಶ್ರೀ ಎಸ್.ವಿ. ಗಾಂವಕಾರರವರನ್ನು (ಶೀನಣ್ಣ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇವರ ಉಪಸ್ಥಿತಿಯಲ್ಲಿ ದಿನಾಂಕ 12.04.1990 ರಂದು “ನಾಡವರ ಸಮಾಜ, ಬೆಂಗಳೂರು(ರಿ)” ಹೆಸರಿನಲ್ಲಿ ನೋಂದಣಿ ಕೆಲಸವನ್ನು ಪೂರ್ಣಗೊಳಿಸಲಾಯಿತು.

“ನಾಡವರ ಸಮಾಜ, ಬೆಂಗಳೂರು (ರಿ)” ನೋಂದಣಿ ಮಾಡುವಾಗ ಇದ್ದ ಸಂಸ್ಥಾಪಕ ಸದಸ್ಯರುಗಳ ಪಟ್ಟಿ

  • ಶ್ರೀ ಎಸ್.ವಿ. ಗಾಂವಕ
    ಅಧ್ಯಕ್ಷರು
  • ಶ್ರೀ ಹಮ್ಮಣ್ಣ ವಿ. ನಾಯಕ್
    ಖಜಾಂಚಿ
  • ಶ್ರೀ ಶ್ರೀರಂಗ ಆರ್. ನಾಯಕ್
    ಸದಸ್ಯರು
  • ಶ್ರೀ ಉದಯರಾಜ್ ನಾಯಕ್
    ಸದಸ್ಯರು
  • ಶ್ರೀ ಗೋಪಾಲ್ ಜೆ. ನಾಯಕ್
    ಸದಸ್ಯರು
  • ಶ್ರೀ ಜ್ಞಾನದೇವ ವಿ. ನಾಯಕ್
    ಸದಸ್ಯರು
  • ಶ್ರೀ ಜಯಾ ಎನ್.ನಾಯಕ್
    ಸದಸ್ಯರು
  • ಶ್ರೀ ಸುರೇಶ್ ಬಿ. ನಾಯಕ್
    ಸದಸ್ಯರು
  • ಶ್ರೀ ದೇವಣ್ಣ ನಾರಾಯಣ ನಾಯಕ್
    ಸದಸ್ಯರು
  • ಶ್ರೀ ಚೇತನ್ ಟಿ. ನಾಯ್ಕ
    ಕಾರ್ಯದರ್ಶಿ
  • ಶ್ರೀ ಎಸ್.ವಿ. ತೊರ್ಕೆ
    ಸದಸ್ಯರು
  • ಶ್ರೀ ಸುಬ್ರಾಯ್ ಆರ್. ನಾಯಕ್
    ಸದಸ್ಯರು
  • ಶ್ರೀ ರಮೇಶ್ ಎನ್ ತಗರ್‌ಪು
    ಸದಸ್ಯರು
  • ಶ್ರೀ ಆರ್.ವಿ. ನಾಯಕ್‌
    ಸದಸ್ಯರು
  • ಶ್ರೀಮತಿ ಶೋಭಾ ಟಿ. ನಾಯ್ಕ
    ಸದಸ್ಯರು
  • ಶ್ರೀಮತಿ ಕಾಂಚನ್ ಉದಯರಾಜ್
    ಸದಸ್ಯರು
  • ಶ್ರೀಮತಿ ಇಂದಿರಾ ಆರ್. ನಾಯಕ್
    ಸದಸ್ಯರು
  • ಶ್ರೀ ಗಣರಾಜ್ ಹೆಚ್. ನಾಯಕ್
    ಸದಸ್ಯರು
  • ಶ್ರೀ ಮಧುಸೂದನ್ ಆರ್.ನಾಯಕ್
    ಜಂಟಿ ಕಾರ್ಯದರ್ಶಿ
  • ಶ್ರೀ ಬೊಮ್ಮಯ್ಯ ಹೆಚ್. ನಾಯಕ್
    ಸದಸ್ಯರು
  • ಶ್ರೀ ವಿನೋದ್ ಬಿ. ನಾಯಕ್
    ಸದಸ್ಯರು
  • ಶ್ರೀ ಹೆಚ್.ಬಿ. ನಾಯಕ್
    ಸದಸ್ಯರು
  • ಶ್ರೀ ಮಂಜುನಾಥ ಎಂ. ನಾಯಕ್
    ಸದಸ್ಯರು
  • ಶ್ರೀ ಜಗದೀಶ್ ಎಲ್. ನಾಯಕ್
    ಸದಸ್ಯರು
  • ಶ್ರೀ ನಾರಾಯಣ್‌ ಎಂ. ನಾಯಕ್
    ಸದಸ್ಯರು
  • ಶ್ರೀ ಉದಯ್ ಆರ್. ನಾಯಕ್
    ಸದಸ್ಯರು
  • ಶ್ರೀ ಪಿ.ವಿ. ಕೌರಿ
    ಸದಸ್ಯರು

ಸಂಘ ಸ್ಥಾಪನೆಯಾದ ಕಾಲಘಟ್ಟದ ಕಿರುಪರಿಚಯ:

ನಾವೀಗ 2025 ನೇ ಇಸವಿಯಲ್ಲಿ ಇದ್ದೇವೆ. ಇಲ್ಲಿಂದ ಸುಮಾರು 35 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಹೇಗಿತ್ತು ಎಂಬ ಬಗ್ಗೆ ನಮ್ಮ ಯುವಪೀಳಿಗೆಗೆ ತಿಳಿಸಿಕೊಡುವ ಒಂದು ಪ್ರಯತ್ನ.

  • ಇಂದಿನಂತೆ ಅಂದು ಸ್ಮಾರ್ಟ್ಫೋನ್, ಮೊಬೈಲ್ ಫೋನ್ ಅಷ್ಟೇ ಏಕೆ? ಎಸ್.ಎಂ.ಎಸ್ ಕಳಿಸಲು ಬೇಕಾದ ಸಾಧನಗಳೂ ಇರಲಿಲ್ಲ. ತುರ್ತು ಸಂದರ್ಭಗಳಲ್ಲಿ ಮನೆಗೆ ಖುದ್ದಾಗಿ ಹೋಗಿ ತಿಳಿಸಬೇಕಾದ ಕಾಲವದಾಗಿತ್ತು.
  • ಇಂದಿನಂತೆ ಅಂದು ಒಂದೆರಡು ಮನೆಗಳನ್ನು ಹೊರತುಪಡಿಸಿ, ನಾಡವರ ಸ್ವಂತ ಮನೆಗಳಿರಲಿಲ್ಲ. ಎಲ್ಲರೂ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದ ಕಾಲವಾಗಿತ್ತು.
  • ಇಂದಿನಂತೆ ಅಂದು ಮೆಟ್ರೋ ಸೌಕರ್ಯವಿರಲಿಲ್ಲ. ಉಬರ್, ಓಲಾ ಸೇವೆಗಳಿರಲಿಲ್ಲ. ಬಾಡಿಗೆ ಕಾರುಗಳಲ್ಲಿ ಓಡಾಡುವಷ್ಟು ಸ್ಥಿತಿವಂತರಿಲ್ಲ. ಮೂರು-ನಾಲ್ಕು ಜನರನ್ನು ಹೊರತುಪಡಿಸಿದರೆ, ಸ್ವಂತ ಕಾರುಗಳು ನಮ್ಮವರ ಹತ್ತಿರ ಇರಲಿಲ್ಲ. ಹಾಗಾಗಿ ಬಿ.ಎಂ.ಟಿ.ಸಿ. ಬಸ್ಸುಗಳನ್ನೇ ಅವಲಂಬಿಸಿದ್ದ ಕಾಲವದಾಗಿತ್ತು.
  • ಇಂದಿನಂತೆ ಅಂದು ಲಕ್ಷ-ಲಕ್ಷ ಸಂಬಳ ಪಡೆಯುವವರಿರಲಿಲ್ಲ, ನಾಲ್ಕು ಅಂಕೆಯ ಸಂಬಳ ಎಣಿಸುವವರೇ ಎಲ್ಲರೂ. ಸಂಘದ ಸದಸ್ಯತ್ವಕ್ಕೆ ಹಣ ನೀಡಲು ಹಿಂದೆ ಮುಂದೆ ನೋಡುವ ಕಾಲವದ್ದಾಗಿತ್ತು.
  • ಇಂದಿನಂತೆ ಅಂದು 2000, 1000, 500, 200 ರೂಪಾಯಿಗಳನ್ನೇ ನೋಡಿರಲಿಲ್ಲ. ಏನಿದ್ದರೂ 1, 2, 5, 10, 20, 50 ಹಾಗೂ 100 ರೂಪಾಯಿಗಳನ್ನಷ್ಟೇ ಎಣಿಸುವ ಕಾಲವದಾಗಿತ್ತು.
  • ಇಂದಿನಂತೆ ಅಂದು ದೊಡ್ಡ ದೊಡ್ಡ ಸ್ಕ್ರೀನ್ ಇರುವ ಟಿ.ವಿ.ಗಳಿರಲಿಲ್ಲ, ಕಲರ್ ಟಿ.ವಿ. ನೋಡುವ ಭಾಗ್ಯ ಎಲ್ಲರಿಗಿರಲಿಲ್ಲ. ಕಪ್ಪು-ಬಿಳುಪಿನ ಟಿ.ವಿ.ಯೂ ಸಹ ಎಲ್ಲರ ಮನೆಗಳಿರಲಿಲ್ಲ. ಇದ್ದರೂ ದೂರದರ್ಶನ ಬಿಟ್ಟು ಬೇರೆ ಚಾನಲ್‌ಗಳಿರಲಿಲ್ಲ. ಅಂತಹ ಕಾಲವದಾಗಿತ್ತು.
  • ಇಂದಿನಂತೆ ಅಂದು ಬೆಂಗಳೂರು ನಾಡವರ ಜನಸಂಖ್ಯೆ ಸಾವಿರ ಸಾವಿರ ಇರಲಿಲ್ಲ. ನೂರು ಸಂಖ್ಯೆ ದಾಟಿದರೆ ಸಾಕೆಂಬುವವರೇ ಹೆಚ್ಚು. ಹೀಗೆ ಜನಬಲ, ಹಣಬಲವಿಲ್ಲದ ಕಾಲಘಟ್ಟದಲ್ಲಿ ನಮ್ಮ ಈ ‘ನಾಡವರ ಸಮಾಜ ಬೆಂಗಳೂರು (ರಿ)’, ಅಸ್ತಿತ್ವಕ್ಕೆ ಬಂದಿರುವುದು ಸಂತೋಷದ ವಿಷಯವೇ ಸರಿ.

‘ನಾಡವರ ಸಮಾಜ’, ಬೆಂಗಳೂರು ಇವರ ಬೈಲಾ ಪ್ರಕಾರ ಪ್ರಾರಂಭದಲ್ಲಿ (1) ಪೋಷಕ ಸದಸ್ಯರು (2) ಅಜೀವ ಸದಸ್ಯರು (3) ಸಾಮಾನ್ಯ ಸದಸ್ಯರು ಹಾಗೂ (4) ವಿದ್ಯಾರ್ಥಿ ಸದಸ್ಯರು ಎಂಬ ನಾಲ್ಕು ವಿಧವಾದ ಸದಸ್ಯತ್ವ ಪಡೆಯಲು ಅವಕಾಶಗಳಿದ್ದು, ತದನಂತರದ ವರ್ಷಗಳಲ್ಲಿ ಪೋಷಕ ಸದಸ್ಯತ್ವ ಪಡೆಯಲು ರೂ.5000/- ಗಳು (ಗಂಡ-ಹೆಂಡತಿ ಸೇರಿ) ಹಾಗೂ ಅಜೀವ ಸದಸ್ಯತ್ವ ಪಡೆಯಲು ತಲಾ ರೂ.1000/- ಗಳನ್ನು ನಿಗದಿಪಡಿಸಿದ್ದು, ಪ್ರಸ್ತುತ ಇವೆರಡು ಸದಸ್ವತ್ವ ಚಾಲ್ತಿಯಲ್ಲಿರುತ್ತದೆ. ಇಂದಿಗೆ ಸರಿಸುಮಾರು 500 ಕ್ಕಿಂತ ಹೆಚ್ಚಿನ ಸದಸ್ಯತ್ವ ಪಡೆದಿರುತ್ತಾರೆ. ‘ನಾಡವರ ಸಮಾಜ, ಬೆಂಗಳೂರು (ರಿ)’ ಇದು ಒಂದು ಕಾರ್ಯಕಾರಿ ಸಮಿತಿಯನ್ನು ಹೊಂದಿರುತ್ತದೆ. ಸದರಿ ಸಮಿತಿಯಲ್ಲಿ (1) ಅಧ್ಯಕ್ಷರು (2) ಉಪಾಧ್ಯಕ್ಷರು (3) ಕಾರ್ಯದರ್ಶಿ (4) ಜಂಟಿ ಕಾರ್ಯದರ್ಶಿಗಳು ಹಾಗೂ (5) ಖಜಾಂಚಿಗಳು ಹೀಗೆ ಐದು ಪದಾಧಿಕಾರಿಗಳು ಹಾಗೂ ಆರು ಕಾರ್ಯಕಾರಿ ಸದಸ್ಯರು ಸೇರಿ ಹನ್ನೊಂದು ಜನರಿರುತ್ತಾರೆ. ಸರ್ವ ಸದಸ್ಯರ ಮಹಾಸಭೆಯಲ್ಲಿ ಈ 11 ಜನರನ್ನು ಸರ್ವಾನುಮತದಿಂದ ಅಥವಾ ಚುನಾವಣೆ ನಡೆಸಿ ಆಯ್ಕೆ ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಆಯ್ಕೆ ಮಾಡುವಾಗ ಸಮಾಜದ ಸದಸ್ಯರೊಬ್ಬರನ್ನು ಚುನಾವಣಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡು ಅವರ ಉಸ್ತುವಾರಿಯಲ್ಲಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನಾಡವರ ಸಮಾಜ ಬೆಂಗಳೂರು (ರಿ) ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಸರ್ವಸದಸ್ಯರ ಮಹಾಸಭೆಯು ದಿನಾಂಕ 18.03.1990 ರಂದು ಬೆಂಗಳೂರಿನಲ್ಲಿರುವ ವಿಜಯನಗರ ಕ್ಲಬ್‌ನಲ್ಲಿ ನಡೆಸಿದ್ದು, ಸದರಿ ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಶ್ರೀ ಎಸ್.ವಿ. ಗಾವಂಕರ್ ರವರು ವಹಿಸಿಕೊಂಡಿದ್ದರು. ಸದಸ್ಯರಾದ ಶ್ರೀ ವಿದ್ಯಾಶಂಕರ ಆರ್.ನಾಯಕ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಈ ಸರ್ವ ಸದಸ್ಯರ ಮಹಾಸಭೆಯಲ್ಲಿ ಶ್ರೀರಂಗ ರಾಮಾ ನಾಯಕರು ಪ್ರಪ್ರಥಮ ಅಧ್ಯಕ್ಷರಾಗಿ, ಶ್ರೀ ಜ್ಞಾನದೇವ ವ್ಹಿ ನಾಯಕ ಇವರು ಉಪಾಧ್ಯಕ್ಷರಾಗಿ, ಚೇತನ ಟಿ. ನಾಯಕ ಇವರು ಕಾರ್ಯದರ್ಶಿಯಾಗಿ, ಶ್ರೀ ಎಂ.ಅರ್. ನಾಯಕ್ ಇವರು ಕಾರ್ಯದರ್ಶಿಯಾಗಿ, ಶ್ರೀ ಹೆಚ್.ವಿ. ನಾಯಕ್‌ರವರು ಖಜಾಂಚಿಯಾಗಿ ಹಾಗೂ ಶ್ರೀಮತಿ ಭಾರತಿ ಗಾವಂಕರ, ಉದಯರಾಜ್ ಎಂ. ನಾಯಕ್, ರಮೇಶ್ ಟಗರಪುರ, ಜಯಾ ಎನ್ ನಾಯಕ್, ಗಣರಾಜ್ ಹೆಚ್ ನಾಯಕ್ ಹಾಗೂ ಜಿ.ಜೆ. ನಾಯಕ್ ಇವರುಗಳು ಆರು ಜನ ಸದಸ್ಯರಾಗಿ, ಒಟ್ಟು 11 ಜನರೂ ಅವಿರೋಧವಾಗಿ ಹಾಗೂ ಸರ್ವಾನುಮತದಿಂದ ಆಯ್ಕೆಗೊಂಡಿದ್ದರು. ಕಾರ್ಯಕಾರಿ ಸಮಿತಿಯ ಅವಧಿಯನ್ನು ಪ್ರಾರಂಭದಲ್ಲಿ ಒಂದು ವರ್ಷದ ಅವಧಿಗೆ ಮಿತಿಗೊಳಿಸಿದ್ದು, ಪ್ರತಿವರ್ಷ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಈ ಕಾಲಾವಧಿಯನ್ನು 2 ವರ್ಷಗಳಿಗೆ ಹೆಚ್ಚಿಸಿದ್ದು, ಪ್ರತಿ ಎರಡು ವರ್ಷಗಳಿಗೊಮ್ಮೆ ಹೊಸ ಕಾರ್ಯಕಾರಿ ಸಮಿತಿಯನ್ನು ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡುತ್ತಾ ಬರಲಾಗುತ್ತಿದೆ. ಪ್ರತಿವರ್ಷ ಸರ್ವ ಸದಸ್ಯರ ಮಹಾಸಭೆಯನ್ನು ನಡೆಸಿ ಹಿಂದಿನ ವರ್ಷದಲ್ಲಿ ನಡೆಸಿದ ಕಾರ್ಯಕ್ರಮಗಳು ಹಾಗೂ ಜಮಾ-ಖರ್ಚಿನ ವಿವರಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗುತ್ತಿದೆ ಹಾಗೂ ಸದರಿ ಜಮಾ-ಖರ್ಚಿನ ಪಟ್ಟಿಯನ್ನು ಚಾರ್ಟಡ್ ಅಕೌಂಟೆಂಟ್ ರವರಿಂದ ಪರಿಶೋಧಿಸಿ, ಸಹಿ ಪಡೆದು ದೃಢೀಕೃತ ಮುದ್ರೆಯೊಂದಿಗೆ ಸಂಘಗಳ ನೋಂದಣಾಧಿಕಾರಿ ಕಚೇರಿಗೆ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸಹಿ ಹಾಗೂ ಸಂಘದ ಮುದ್ರೆಯೊಂದಿಗೆ ಸಲ್ಲಿಸಿ, ಪ್ರತಿವರ್ಷ ಸಂಘದ ನೋಂದಣಿಯನ್ನು ನವೀಕರಿಸಲಾಗುತ್ತಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಸಮಾಜದ ಅಗತ್ಯತೆಗೆ ತಕ್ಕಂತೆ ನಾಡವರ ಸಮಾಜ ಬೆಂಗಳೂರು (ರಿ) ಇದರ ಬೈಲಾವನ್ನು ತಿದ್ದುಪಡಿ ಮಾಡಿ ಸದರಿ ವಿಷಯವನ್ನು, ತಿದ್ದುಪಡಿಯ ವಿವರಗಳನ್ನು ಸರ್ವಸದಸ್ಯರ ಮಹಾಸಭೆಯ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಸಹಿ ಹಾಗೂ ಮುದ್ರೆಯೊಂದಿಗೆ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಕಳುಹಿಸಬೇಕಾಗಿರುತ್ತದೆ.

ನಾಡವರ ಸಮಾಜ ಬೆಂಗಳೂರು (ರಿ) ಇದರ ಉದ್ದೇಶಗಳಲ್ಲಿ, ನಾಡವರ ಸಮಾಜದ ಹೆಸರಿನಲ್ಲಿ ಒಂದು ನಿವೇಶನವನ್ನು ಖರೀದಿಸಿ, ಊರಿನಿಂದ ಬರುವವರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಬೇಕೆಂದೂ, ನಂತರದಲ್ಲಿ, ನಮ್ಮದೇ ಆದ ಸಭಾಭವನ ನಿರ್ಮಿಸಿ, ಅದರಿಂದ ಆದಾಯ ಬರುವಂತೆ ಮಾಡಿ ಸಮಾಜವನ್ನು ಇನ್ನಷ್ಟು ಬೆಳೆಸುವ ಗುರಿಯನ್ನು ಹೊಂದಲಾಗಿತ್ತು. "ಬೆಳಕು" ಎಂಬ ಸ್ಮರಣ ಸಂಚಿಕೆಯನ್ನು ಹೊರತಂದು ಅದರಲ್ಲಿ ಸಮಾಜ ಬಾಂಧವರಿಂದ ಜಾಹಿರಾತನ್ನು ಕಲೆಹಾಕಿ ನಿವೇಶನ ಖರೀದಿಗೆ ಹಣ ಹೊಂದಿಸುವಲ್ಲಿ ನಮ್ಮ ಸಮಾಜ ಬಾಂಧವರು ಶ್ರಮಿಸಿದರು. ಸ್ಮರಣಸಂಚಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಅಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಪ್ರಕಾಶ್‌ಕೆಫೆ ಸಭಾಂಗಣದಲ್ಲಿ ನಡೆಸಿದ್ದು, ಆಗಿನ ಉಡುಪಿ ಕ್ಷೇತ್ರದ ಸಂಸದರು ಹಾಗೂ ಉದ್ದಿಮೆದಾರರಾದ ಶ್ರೀ. ಐ.ಎಂ. ಜಯರಾಮ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದರು. ಅಲ್ಲದೇ, ಇವರು ಸಮಾಜಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರೊಂದಿಗೆ ಅಂದಿನ ಸಮಾಜದ ಸದಸ್ಯರಾಗಿದ್ದ ಶ್ರೀ ಪ್ರಮೋದ್ ವಿ ನಾಯಕ್, ಜಮಗೋಡರವರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ. ಹಲವು ವರ್ಷಗಳ ತರುವಾಯ, ನಮ್ಮ ಸಮಾಜದ ಸದಸ್ಯರಾದ ಶ್ರೀ ವ್ಹಿ. ಎನ್. ನಾಯಕ್, ಇವರು ಸಮಾಜದ ಬಗ್ಗೆ ಆಸಕ್ತಿವಹಿಸಿ, ತಮ್ಮ ಕೈಲಾದ ಪ್ರಯತ್ನ ಮಾಡಿ ರಾಜರಾಜೇಶ್ವರಿನಗರ, ಬೆಂಗಳೂರು, ಇಲ್ಲಿ ನಮ್ಮ ಸಮಾಜಕ್ಕೆ 120*40 ಅಳತೆಯ ನಿವೇಶವನ್ನು ಉಚಿತವಾಗಿ ಸಿಗುವಂತೆ ಮಾಡಿರುತ್ತಾರೆ. ನಂತರದ ದಿನಗಳಲ್ಲಿ ಕಾವೇರಿ ಭವನದ ಎದುರಿನಲ್ಲಿರುವ ಶಿಕ್ಷಕರ ಸಭಾಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡ ನಾಡವ ಬಂಧುಗಳು ಕಟ್ಟಡ ನಿರ್ಮಾಣದ ಹಣ ಕೂಡಿಸುವಲ್ಲಿ ಆಸಕ್ತಿ ವಹಿಸಿ ಹೆಚ್ಚಿನ ದೇಣಿಗೆ ನೀಡಿರುತ್ತಾರೆ ಮತ್ತು ಶ್ರೀ ರಂಗ ಹೆಚ್ ನಾಯಕ್, ಹನೇಹಳ್ಳಿ ಇವರು ಕಟ್ಟಡ ನಿರ್ಮಾಣಕ್ಕೆ ವಯಕ್ತಿಕವಾಗಿ ಅತಿಹೆಚ್ಚಿನ ದೇಣಿಗೆಯನ್ನು ನೀಡಿದ್ದು, ಅವರನ್ನು ಕೂಡ ಇಲ್ಲಿ ಸ್ಮರಿಸುವುದು ಸೂಕ್ತ. ಸಮಾಜದ ಹಿತದೃಷ್ಟಿ ಹಾಗು ಬಾಂಧವರ ಬಳಕೆಗಾಗಿ ಸಮಾಜದ ಮಂದಿರವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ.

ನಾಡವರ ಸಮಾಜ ಬೆಂಗಳೂರು ಇದರ ಕಾರ್ಯಚಟುವಟಿಕೆಗಳು:

ನಾಡವರ ಸಮಾಜ ಬೆಂಗಳೂರು, ಇದು ಪ್ರತಿವರ್ಷ ಕನಿಷ್ಠ ನಾಲ್ಕು ವಿಧವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.ಅವುಗಳೆಂದರೆ:

1.ಬೆಂಗಳೂರು ನಾಡವರ ಬಂಡಿಹಬ್ಬ

ಸಮಾಜದ ಕಾರ್ಯಕ್ರಮದ ಪಟ್ಟಿಯಲ್ಲಿ ಬಂಡಿಹಬ್ಬ ಕಾರ್ಯಕ್ರಮವು ಅಗ್ರಸ್ಥಾನವನ್ನು ಪಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಭಾಗವಹಿಸಿ ಕುಲಬಾಂಧವರೊಂದಿಗೆ ಬೆರೆತು ಕುಶಲೋಪರಿಯಿಂದ ಕಾಲ ಕಳೆಯಲು ಇದೊಂದು ಸದಾವಕಾಶವನ್ನು ಒದಗಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳಿದ್ದು, ಮಕ್ಕಳೊಂದಿಗೆ ಬೆರೆತು ಖುಷಿಪಡುವ ದಿನವಾಗಿರುತ್ತದೆ. ಬೆಳಗ್ಗೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬಹುಮಾನಗಳನ್ನು ಪಡೆಯುವ ಅವಕಾಶ, ನಂತರದಲ್ಲಿ ಊರಿಂದ ತಂದ ನಾಡವರ ಮೆಚ್ಚಿನ ಶಿಟ್ಲಿನ ಸಾರು ಹಾಗೂ ಕುಸಲಕ್ಕಿ ಗಂಜಿ ಸವಿಯುವ ಅವಕಾಶಗಳಿರುತ್ತದೆ. ಸಂಜೆ ನೃತ್ಯ, ನಾಟಕ, ಯಕ್ಷಗಾನಗಳನ್ನೊಳಗೊಂಡ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಊರಿನಲ್ಲಿ ಮಾಡುವ ಕೋಳಿ ಸಾರು, ಅಕ್ಕಿರೊಟ್ಟಿ, ವಡೆ ಸವಿಯುವ ಸುವರ್ಣವಕಾಶ. ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲರೊಂದಿಗೆ ಕುಳಿತು ಸಹಭೋಜನ ಮಾಡುವ ಖುಷಿ ಎಲ್ಲರದಾಗಿರುತ್ತದೆ. ಯುವಕರಂತೂ ಎಲ್ಲರಿಗೂ ಹೊಟ್ಟೆ ತುಂಬಾ ಊಟ ಬಡಿಸುವ ಸಂಭ್ರಮಕ್ಕಾಗಿ ತುದಿಗಾಲಿನಲ್ಲಿ ನಿಂತಿರುತ್ತಾರೆ.

ಇದರೊಂದಿಗೆ ಬಂಡಿಹಬ್ಬದಲ್ಲಿ ಒಳಗೊಂಡಿರುವ ಇತರೆ ಕಾರ್ಯಕ್ರಮಗಳು ಇಂತಿವೆ:

  • ಪ್ರತಿವರ್ಷ ಬಂಡಿ ಹಬ್ಬದಂದು ವಿಶೇಷ ವ್ಯಕ್ತಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸನ್ಮಾನಿಸುವ ಕಾರ್ಯಕ್ರಮವಿರುತ್ತದೆ.
  • ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ., 2.0000.2., ಡಿಗ್ರಿ, ಪಿ.ಜಿ. ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ.
  • ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
  • ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
  • ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ, ಹುದ್ದೆ ಪಡೆದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಈ ಹಿಂದಿನ ಹಲವಾರು ಬಂಡಿಹಬ್ಬದ ಕಾರ್ಯಕ್ರಮದಲ್ಲಿ ಒಟ್ಟಾರೆ ನಾಡವರ ಸಮಾಜದ ಈ ಕೆಳಗಿನ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಗಿರುತ್ತದೆ.

  • ಶ್ರೀ ಎನ್.ಆರ್.ನಾಯಕ್-ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳು
  • ಡಾ|| ನಿರಂಜನ್ ಕೆ. ನಾಯಕ್ - ವಿಜ್ಞಾನಿಗಳು, ಮುಂಬೈ
  • ಶ್ರೀ ಮೋಹನ್ ಎಂ.ನಾಯಕ್-ಉದ್ದಿಮೆದಾರರು, ಮುಂಬೈ
  • ಶ್ರೀ ಎಸ್.ಆರ್.ನಾಯ್ಕ-ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಹಾಗೂ ಕಾನೂನು ಮಂಡಳಿತ ಅಧ್ಯಕ್ಷರು.

ಇವರನ್ನು ಹೊರತುಪಡಿಸಿ ಸಂಘ ಪ್ರಾರಂಭವಾದ ಹೊಸದರಲ್ಲಿ ನಮ್ಮ ಸಮಾಜದ ಗಣ್ಯರು ಹಾಗೂ ನಿವೃತ್ತಿ ಪಿ.ಯು.ಸಿ. ಬೋರ್ಡಿನ ನಿರ್ದೇಶಕರಾದ ಶ್ರೀ ವಿ.ಬಿ. ಗಾವಂಕರ್ ಹಾಗೂ ಹೊಸ್ಕೇರಿ ಗ್ರಾಮದ ಗಣ್ಯರು ಹಾಗೂ ಸ್ವಾತಂತ್ರ್ಯ ಯೋಧರು ಆದ ಶ್ರೀ ಜೋಗಿ ಬೀರಣ್ಣ ನಾಯಕ ಇವರನ್ನು ಸಹ ನಮ್ಮ ಸಮಾಜ ಬೆಂಗಳೂರಿನ ಸರ್ವಸದಸ್ಯರ ಸಭೆಗೆ ಆಹ್ವಾನಿಸಿ ಸನ್ಮಾನಿಸಲಾಗಿರುತ್ತದೆ. ಅವರುಗಳು ಸಹ ಸದರಿ ಸಭೆಯನ್ನು ಉದ್ದೇಶಿಸಿ ನಾಡವರ ಗುಣಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿಕೊಡುವುದರ ಜೊತೆಗೆ ಮುಂದಿನ ಪೀಳಿಗೆ ಜೀವನದಲ್ಲಿ ಯಾವ ರೀತಿ ಶಿಸ್ತನ್ನು ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

2. ಯಕ್ಷಗಾನ:

ಪ್ರತಿವರ್ಷ ಸಮಾಜವು ಬೇರೆ ಬೇರೆ ಯಕ್ಷಗಾನ ತಂಡವನ್ನು ಕರೆಯಿಸಿ ನಮ್ಮ ಸಮಾಜದ ಸದಸ್ಯರಲ್ಲಿಯೂ ಇದರ ಅಭಿರುಚಿ ಹೆಚ್ಚುವಂತೆ ಮಾಡಿ ಕರಾವಳಿಯ ಕಲೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ತಂಡದ ಜೊತೆಗೆ ನಮ್ಮ ಸಮಾಜದ ಸದಸ್ಯರ ಮಕ್ಕಳೂ ಸಹ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುತ್ತಿರುವುದು, ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ.

3. ಸದಸ್ಯರುಗಳಿಗೆ ಪ್ರವಾಸ:

ನಾಡವರ ಸಮಾಜ ಸ್ಥಾಪನೆಯಾದಾಗಿನಿಂದ ಹತ್ತು ಹಲವಾರು ವಿವಿಧ ಪ್ರವಾಸಿ ಸ್ಥಳಗಳಿಗೆ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಸದರಿ ಪ್ರವಾಸದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡ ಸದಸ್ಯರು ಹಿರಿ-ಕಿರಿಯರೆನ್ನದೆ ಒಟ್ಟಾಗಿ ಬೆರೆತು, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ, ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಹರಟೆ-ಮಾತುಕತೆಗಳೊಂದಿಗೆ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಮರೆತು ನಗುನಗುತ್ತಾ ಕಾಲಕಳೆದು, ಸುಂದರ ನೆನಪುಗಳೊಂದಿಗೆ ತಮ್ಮ ಮನೆಗಳಿಗೆ ವಾಪಾಸ್ಸಾಗುವ ಕಾರ್ಯವು ಈ ಪ್ರವಾಸದಿಂದ ಸಾಧ್ಯವಾಗಿರುತ್ತದೆ. ಒಟ್ಟಾಗಿ ಬಸ್ಸಿನಲ್ಲಿ ಪ್ರಯಾಣಿಸುವ, ಒಟ್ಟಾಗಿ ಕುಳಿತು ಊಟ ಮಾಡುವ,ಚಿಕ್ಕ ಮಕ್ಕಳ ಆಟಗಳನ್ನು ನೋಡಿ ಆನಂದಿಸುವ ಅವಕಾಶ ಈ ಪ್ರವಾಸದಿಂದ ಸಿಗುತ್ತಿದೆ.

4. ನಾಡವರ ಬಾಡ್ಮಿಂಟನ್ ಟೂರ್ನಮೆಂಟ್:

ಇತ್ತೀಚೆಗೆ ಅಂದರೆ, ಕಳೆದ ಐದಾರು ವರ್ಷಗಳಿಂದ ನಾಡವರ ಸಮಾಜ, ಬೆಂಗಳೂರಿನ ಯುವಕರು ಶ್ರೀ ಶಿವಪ್ಪ ಪಿ. ನಾಗರಕಟ್ಟೆ ಇವರ ಸಾರಥ್ಯದಲ್ಲಿ, ಸಹಾಯ-ಸಹಕಾರದೊಂದಿಗೆ ಹಾಗೂ ಸಮಾಜದ ಸದಸ್ಯರುಗಳ ಧನ ಸಹಾಯದಿಂದ ನಾಡವರ ಬಾಡ್ಮಿಂಟನ್ ಟೂರ್ನಮೆಂಟನ್ನು ಅಂತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಟೂರ್ನಮೆಂಟ್‌ಗೆ ರಾಜ್ಯ ವಿವಿಧ ಭಾಗಗಳಿಂದ ಸುಮಾರು 25 ರಿಂದ 30 ತಂಡಗಳು ಆಗಮಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾಗುತ್ತಿದ್ದಾರೆ. ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಿದ್ದು, ಸಂಗ್ರಹಗೊಂಡ ಮೊತ್ತವನ್ನು ಇದೇ ಕಾರ್ಯಕ್ರಮಕ್ಕಾಗಿ ವಿನಿಯೋಗಿಸಲಾಗುತ್ತಿದೆ. ನಾಡವರ ಬಾಡ್ಮಿಂಟನ್ ಟೂರ್ನಮೆಂಟನಲ್ಲಿ ನುರಿತ ನಿರ್ಣಾಯಕರನ್ನು ನೇಮಕಮಾಡಿಕೊಳ್ಳಲಾಗುತ್ತಿದೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಕರೆಯಿಸಿ, ಅವರಿಂದ ನಮ್ಮ ಸಮಾಜದ ಯುವಪೀಳಿಗೆಗೆ ಮಾರ್ಗದರ್ಶನ ಒದಗಿಸಿ, ಅನುಭವಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ಸಮಾಜದ ಯುವ ಪ್ರತಿಭೆಗಳು ವರ್ಷದಿಂದ ವರ್ಷಕ್ಕೆ ಈ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಅವರನ್ನು ಹುರಿದುಂಬಿಸಲು ಅವರುಗಳ ಕುಟುಂಬದವರು ಭಾಗಹಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಪುರುಷರು-ಮಹಿಳೆಯರು, ಹಿರಿಯರು-ಕಿರಿಯರು, ಹೀಗೆ ಎಲ್ಲಾ ವರ್ಗದವರಿಗೆ ವಯೋಮಿತಿ ಆಧಾರದ ಮೇಲೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಪ್ರತಿವರ್ಷ ಸಮಾಜದ ಸದಸ್ಯರಲ್ಲಿ ಕೆಲವರನ್ನು ಅತಿಥಿಗಳನ್ನಾಗಿ ಆಯ್ಕೆ ಮಾಡಿಕೊಂಡು, ಸ್ಪರ್ಧಾಳುಗಳ ಪರಿಚಯ ಮಾಡಿಕೊಡಲಾಗುತ್ತದೆ. ಅತಿಥಿಗಳು ಸಹ ಆಟಗಾರರನ್ನು ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದಾರೆ. ನಾಡವರ ಬಾಡ್ಮಿಂಟನ್ ಟೂರ್ನಮೆಂಟನಲ್ಲಿ ಭಾಗವಹಿಸುವ ಎಲ್ಲರಿಗೂ ಟೀ, ಕಾಫೀ, ಲಘು ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಸಮಾಜದ ಸದಸ್ಯರುಗಳು ಈ ಕಾರ್ಯಕ್ರಮಕ್ಕೆ ಅಗತ್ಯವಾದ ಧನಸಹಾಯ ಮಾಡುತ್ತಿದ್ದು, ಇನ್ನೂ ಕೆಲವರು ಬಹುಮಾನಗಳ ಮೊತ್ತವನ್ನು ತಾವುಗಳು ಪ್ರಾಯೋಜಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾಗಿದ್ದಾರೆ. ನಾಡವರ ಬಾಡ್ಮಿಂಟನ್ ಟೂರ್ನಮೆಂಟನಲ್ಲಿ ಹಲವಾರು ರೀತಿಯ ಬಹುಮಾನಗಳನ್ನು ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ನೀಡಲಾಗುತ್ತಿದೆ. ಸ್ಮರಣಿಕೆ ಹಾಗೂ ನಗದು ರೂಪದಲ್ಲಿಯೂ ಬಹುಮಾನ ನೀಡಲಾಗುತ್ತಿದೆ. ನಾಡವರ ಸಮಾಜ ಬೆಂಗಳೂರು ವತಿಯಿಂದ ಪ್ರಥಮ ಬಹುಮಾನವನ್ನು ನೀಡಲಾಗುತ್ತಿದೆ. ಸದರಿ ಕಾರ್ಯಕ್ರಮದ ನಂತರದಲ್ಲಿ ಉಳಿಯುವ ಹೆಚ್ಚುವರಿ ಹಣವನ್ನು ಸಮಾಜದ ಖಾತೆಗೆ ಜಮಾ ಮಾಡಲಾಗುತ್ತಿದೆ.

ಸಾಮಾಜಿಕ ಕಾರ್ಯಕ್ರಮಗಳು:

1. ವೈದ್ಯಕೀಯ ನೆರವು:

ನಾಡವರ ಸಮಾಜ ಬೆಂಗಳೂರು, ಇದು ಸಾಮಾಜಿಕ ಬದ್ಧತೆಯನ್ನು ಹೊಂದಿದ್ದು, ಬೆಂಗಳೂರಿನಲ್ಲಿ ವಾಸಿಸುವ ನಾಡವರ ಜೊತೆಗೆ ವಿವಿಧ ಊರುಗಳಲ್ಲಿ ವಾಸಿಸುತ್ತಿರುವ ನಾಡವರದಲ್ಲಿ ಯಾರಾದರೂ ತೀವ್ರತರನಾದ ಖಾಯಿಲೆಗೆ ತುತ್ತಾಗಿ, ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಡುಬಡವರನ್ನು ಗುರುತಿಸಿ, ಅವರ ಕೋರಿಕೆಯ ಮೇರೆಗೆ ರೂ.25,000/- ಗಳನ್ನು ಮೀರದಂತೆ ಹಲವಾರು ಜನರಿಗೆ ವೈದ್ಯಕೀಯ ನೆರವನ್ನು ನೀಡುತ್ತಾ ಬಂದಿದೆ. ಸದರಿ ನೆರವನ್ನು ಪಡೆಯಲು ಅರ್ಹವಲ್ಲದ ಪ್ರಕರಣವೊಂದರಲ್ಲಿ ಮಾನವೀಯತೆಯಿಂದ ಶ್ರೀ ಎಂ.ಆರ್. ನಾಯ್ಕ್ರವರು ತಮ್ಮ ಕೈಯಾರೆ ರೂ.25,000/- ಗಳನ್ನು ನೀಡಿರುತ್ತಾರೆ. ಸಮಾಜದ ಬಡವರಿಗೆ ವೈದ್ಯಕೀಯ ನೆರವನ್ನು ನೀಡುವ ಸಲುವಾಗಿ ಪ್ರತ್ಯೇಕ ಮೆಡಿಕಲ್ ಫಂಡ್ ಅನ್ನು ಸ್ಥಾಪಿಸಿದ್ದು, ಇದಕ್ಕಾಗಿ ಈ ಹಿಂದೆ ಯಕ್ಷಗಾನವನ್ನು ಏರ್ಪಡಿಸಿ ಹಣವನ್ನು ಸಂಗ್ರಹಿಸಲಾಗಿರುತ್ತದೆ.

2. ನೆರೆ ಸಂತ್ರಸ್ತರಿಗೆ ನೆರವು:

ಈ ಹಿಂದೆ ಕಾಳಿನದಿಗೆ ನೆರೆ ಬಂದಾಗ, ಕಾರವಾರದ ಸುತ್ತಮುತ್ತಲಿನ ಹಳ್ಳಿಗಳ ಸಂತ್ರಸ್ತರಿಗೆ ಶ್ರೀ ಬಿ.ಟಿ. ನಾಯಕ, ಶ್ರೀ ದಿನೇಶ ಗಾಂವಕರ ಹಾಗೂ ಇತರರ ತಂಡ, ಸಮಾಜದ ಸದಸ್ಯರಿಂದ ಹಣವನ್ನು ಸಂಗ್ರಹಿಸಿ, ಕಾರವಾರ ನಾಡವರ ಸಮಾಜದ ಸದಸ್ಯರು ಹಾಗೂ ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಸಂತ್ರಸ್ತರಿಗೆ ಅಗತ್ಯವಾದ ಅಕ್ಕಿ, ಬೆಡ್‌ಶೀಟ್, ರಗ್ಗುಗಳನ್ನು ಒದಗಿಸಲು ಸಹಾಯ ಮಾಡಿರುತ್ತಾರೆ. ಶರಾವತಿ ನದಿಗೆ ನೆರೆ ಬಂದಾಗ, ನಾಡವರ ಸಮಾಜ ಬೆಂಗಳೂರು, ಇದರ ಕೆಲವು ಸದಸ್ಯರು ಶ್ರೀ ಬಿ.ಟಿ.ನಾಯಕ್‌ರವರ ನೇತೃತ್ವದಲ್ಲಿ ಅಲ್ಲಿಯ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಕೆಲವು ಅಗತ್ಯ ವಸ್ತುಗಳನ್ನು ಒದಗಿಸಿದ್ದಲ್ಲದೇ, ತಮ್ಮ ಕೈಲಾದ ಸಹಾಯವನ್ನೂ ಮಾಡಿರುತ್ತಾರೆ. ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಅಂಕೋಲಾ ತಾಲೂಕಿನ ಸಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ನಿರಾಶ್ರಿತರಾದ ಉಳುವರೆ ಗ್ರಾಮಕ್ಕೆ ಸಮಾಜದ ಅಧ್ಯಕ್ಷರಾದ ಶ್ರೀ ಅರವಿಂದ ನಾಯಕರವರ ನೇತೃತ್ವದಲ್ಲಿ, ಕಾರ್ಯಕಾರಿ ಸಮಿತಿಯ ಸದಸ್ಯರು ಭೇಟಿ ನೀಡಿದ್ದು, ಊರ ನಾಗರೀಕರ ಸಮ್ಮುಖದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, ಸಮಾಜದ ವತಿಯಿಂದ ಕೈಲಾದ ಸಹಾಯವನ್ನು ಮಾಡಿರುತ್ತಾರೆ. ಈ ಕಾರ್ಯಕ್ಕೆ ಬೆಂಗಳೂರು ಉತ್ತರ ಕನ್ನಡ ಸಂಘವೂ ಸಹ ಕೈಜೋಡಿಸಿದ್ದು, ಇದರಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿರುತ್ತದೆ.

3. ಬೆಂಗಳೂರು ನಾಡವರ ಆರೋಗ್ಯ ಶಿಬಿರ

ನಮ್ಮ ಬೆಂಗಳೂರು ನಾಡವ ಸಮಾಜ ಬಾಂಧವರಿಗಾಗಿ ಶ್ರೀಯುತ ಡಿ ಎನ್ ನಾಯಕ ಹೆಲ್ತ್ ಡಿಪಾರ್ಟ್ಮೆಂಟ್ ನ ಸೆಕ್ರೆಟರಿ ಇದ್ದಾಗ ಅವರ ಮುಂದಾಳತ್ವದಲ್ಲಿ ಕೆ ಸಿ ಜನರಲ್ ಹಾಸ್ಪಿಟಲ್ ಅಲ್ಲಿ ಒಂದು ದಿನದ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದೆವು. ಸುಮಾರು ಮುನ್ನೂರಕ್ಕೂ ಹೆಚ್ಚಿನ ಸಮಾಜ ಬಾಂಧವರು ಅದರ ಪ್ರಯೋಜನ ಪಡೆದುಕೊಂಡಿದ್ದರು.ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಆರೋಗ್ಯ ಶಿಬಿರ ಏರ್ಪಡಿಸುವ ಯೋಜನೆಯು ಜೋಡಣೆಯ ಹಂತದಲ್ಲಿದೆ.

4. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ವೆಬಿನಾರ್

ಶ್ರೀ ಜೀವನಕುಮಾರ್ ಗಾಂವಕರ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಮ್ಮ ಸಮಾಜದ ಸುಮಾರು ಆರಕ್ಕೂ ಹೆಚ್ಚು ನುರಿತ ವೈದ್ಯರನ್ನು ಆನ್ಲೈನ್ ಜೂಮ್ ಮೀಟಿಂಗ್ ಗೆ ಆಹ್ವಾನಿಸಿ ಅವರೊಂದಿಗೆ ನಮ್ಮ ಸಮಾಜ ಬಾಂಧವರಿಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಜಗತ್ತಿಗೆ ಮಹಾಮಾರಿಯಾದ ಕೋವಿಡ್ ರೋಗದ ತಡೆ, ಅದರ ಕುರಿತಾದ ಕಾಳಜಿಯ ಚರ್ಚೆಯಲ್ಲಿ ಸುಮಾರು 150 ಕ್ಕೂ ಹೆಚ್ಚಿನ ಜನ ಜೂಮ್ ಮೀಟಿಂಗ್ ಹಾಗು ಸಾವಿರಕ್ಕೂ ಹೆಚ್ಚಿನ ಜನ ಯೌಟ್ಯೂಬ್ ಲೈವ್ ಅಲ್ಲಿ ವೀಕ್ಷಿಸಿದ್ದು ಬಹುಪ್ರಯೋಜನಕಾರಿಯಾಗಿ ಕಾರ್ಯಕ್ರಮ ಮೂಡಿಬಂದಿತ್ತು.

5. ಸಮಾಜದಿಂದ ಪರಿಸರ ಸ್ನೇಹಿ ಕಾರ್ಯಕ್ರಮಗಳು:

ನಾಡವರ ಸಮಾಜ ಬೆಂಗಳೂರು, ಇದು ಶ್ರೀ ಜೀವನ ಕುಮಾರ ಗಾಂವಕರ ಇವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಮಾಜದ ಬಾಂಧವರನ್ನು ಸೇರಿಸಿ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿನ ಪಾರ್ಕಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತ್ತು.ಸದರಿ ಪಾರ್ಕಿನ ಹತ್ತಿರದಲ್ಲಿಯೇ ನಮ್ಮ ಸಮಾಜದ ಸದಸ್ಯರಾದ ಶ್ರೀ ಕೆ.ಆರ್. ನಾಯಕ್‌ರವರ ಮನೆಯಿದ್ದು, ನೆಟ್ಟ ಗಿಡಗಳಿಗೆ ನೀರು ಗೊಬ್ಬರ ಹಾಕಿ ಬೆಳೆಸುವ ಜವಾಬ್ದಾರಿಯನ್ನು ಸ್ವತಃ ಅವರೇ ವಹಿಸಿಕೊಂಡಿದ್ದು, ಸದರಿ ಗಿಡಗಳು ಚೆನ್ನಾಗಿ ಬೆಳೆದು ದೊಡ್ಡದಾಗಿ ಹಚ್ಚಹಸಿರಾಗಿ ಕಾಣುತ್ತಿರುವುದು ಸಂತೋಷದ ವಿಷಯವಾಗಿದೆ. ಇದೇ ಅವಧಿಯ ಇನ್ನೊಂದು ಸಂದರ್ಭದಲ್ಲಿ ಶ್ರೀ ಎಂ.ಆರ್. ನಾಯ್ಕ್ರವರ ನೇತೃತ್ವದಲ್ಲಿ ಅಂಕೋಲಾ ತಾಲೂಕಿನ ಹಿಚ್ಕಡ ಹಾಗೂ ಕೋಡ್ಯಾಣಿ ಗ್ರಾಮದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು. ಎರಡೂ ಕಡೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ, ಸುತ್ತಮುತ್ತಲಿನ ಊರ ನಾಗರೀಕರು, ಹಿರಿಯರು ಹಾಗೂ ಮಂಡಲ ಪಂಚಾಯತಿಯ ಅಧ್ಯಕ್ಷರು / ಸದಸ್ಯರುಗಳ ಸಮ್ಮುಖದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಊರ ನಾಗರೀಕರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿ, ಪರಿಸರದ ಮೇಲಿರುವ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಲಾಯಿತು. ಸದರಿ ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿಗಳಾದ ಶ್ರೀ ಸುರೇಶ ಹೆಬ್ಳಿಕರ್ ಹಾಗೂ ಶ್ರೀ ಸುಕ್ರಿ ಬೊಮ್ಮ ಗೌಡರವರನ್ನು ಆಮಂತ್ರಿಸಲಾಗಿತ್ತು. ಇವರುಗಳ ಉಪಸ್ಥಿತಿಯು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿತ್ತೆಂದರೆ ತಪ್ಪಾಗಲಾರದು.